ಕರ್ನಾಟಕ ರಾಜ್ಯದ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಬೇಗೂರು ಗ್ರಾಮವು, ರಾಜ್ಯದಲ್ಲಿ ಮತ್ತು ಭಾರತ ದೇಶದಲ್ಲಿ ಹೆಸುರುವಾಸಿಯಾದ ಒಂದು ಪ್ರಸಿದ್ದ ಐತಿಹಾಸಿಕ ಗ್ರಾಮವಾಗಿದೆ. ಯುಗಗಳು ಉರುಳಿದಂತೆ, ಈ ಗ್ರಾಮವು ಗಮನಾರ್ಹ ಬದಲಾವಣೆಗಳು ಮತ್ತು ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಬೇಗೂರು ಗ್ರಾಮದ ಬಗ್ಗೆ ಚರಿತ್ರೆಯ ಪುಟಗಳತ್ತ ಒಂದು ಸಂಕ್ಷಿಪ್ತ ನೋಟ:
ಪ್ರಾಚೀನ ಮತ್ತು ಮಧ್ಯಕಾಲೀನ ಯುಗಗಳಲ್ಲಿ: ಬೇಗೂರು ಗ್ರಾಮವು ಪ್ರಾಚೀನ ಮತ್ತು ಮಧ್ಯಕಾಲೀನ ಯುಗಗಳಿಂದಲೂ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಇದು ಗಂಗರ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ನಂತರ ಚೋಳರು ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತು ಎಂದು ನಂಬಲಾಗಿದೆ. ಅವರ ಕಾಲದ ದೇವಸ್ಥಾನಗಳ ಅವಶೇಷಗಳು ಮತ್ತು ಶಿಲಾಶಾಸನಗಳು ಈ ಗ್ರಾಮದಲ್ಲಿ ಕಂಡುಬಂದಿವೆ.
ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ: ಸುಮಾರು 14 ಮತ್ತು 15ನೇ ಶತಮಾನಗಳಲ್ಲಿ ವಿಜಯನಗರ ಸಾಮ್ರಾಜ್ಯವು ಈ ಪ್ರದೇಶದಲ್ಲಿ ತನ್ನ ಪ್ರಾಭಲ್ಯವನ್ನು ಹೊಂದಿತ್ತು. ವಿಜಯನಗರ ಸಾಮ್ರಾಜ್ಯದ ಪ್ರಭಾವದಿಂದ ಶಿವನಿಗೆ ಸಮರ್ಪಿತವಾಗಿರುವ ಬೇಗೂರು ನಾಗೇಶ್ವರ ದೇವಸ್ಥಾನವು ಈ ಯುಗದ ಮಹತ್ವದ ಐತಿಹಾಸಿಕ ಹೆಗ್ಗುರುತಾಗಿದೆ. ಈ ದೇವಸ್ಥಾನದ ಗೋಡೆ ಗೋಪುರಗಳ ಮೇಲಿರುವ ಕೆತ್ತನೆಗಳು ವಿಜಯನಗರ ಶೈಲಿಯ ಕೆತ್ತನೆಗಳಾಗಿದ್ದು, ಅವರ ವಾಸ್ತುಶಿಲ್ಪದ ವಿವರಗಳನ್ನು ಒಳಗೊಂಡಿವೆ.
ವಸಾಹತುಶಾಹಿ ಯುಗದಲ್ಲಿ: ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ, ಈ ಪ್ರದೇಶವು ಮೊಘಲರು ಮತ್ತು ಮರಾಠರು ಸೇರಿದಂತೆ ವಿವಿಧ ಆಡಳಿತಗಾರರ ನಿಯಂತ್ರಣಕ್ಕೆ ಒಳಪಟ್ಟಿತು. ಅಂತಿಮವಾಗಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ಬೆಂಗಳೂರಿನ ಮೇಲೆ ತನ್ನ ಹಿಡಿತ ಸಾಧಿಸಿತು ಮತ್ತು ಬೇಗೂರು ಅವರ ಪ್ರಾದೇಶಿಕ ಆಡಳಿತ ವ್ಯಾಪ್ತಿಗೆ ಒಳಪಟ್ಟಿತು.
ಆಧುನಿಕ ಬೆಳವಣಿಗೆಗಳು: ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಗೆ ಬೇಗೂರು ಸೇರಿಕೊಂಡು ನಗರೀಕರಣ ಮತ್ತು ಆಧುನೀಕರಣವನ್ನು ಕಾಣುತ್ತಿದೆ. ಬೆಂಗಳೂರು ನಗರ ಬೆಳೆದಂತೆ, ಬೇಗೂರು ತನ್ನ ಸಾಂಪ್ರದಾಯಿಕ ಗ್ರಾಮದ ರೂಪವನ್ನು ಕಳೆದುಕೊಂಡು ನಗರ ರಚನೆಯ ರೂಪಕ್ಕೆ ಪರಿವರ್ತನೆಯಾಗುತ್ತಿದೆ. ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳ ಮತ್ತು ಇತರ ಕೈಗಾರಿಕೆಗಳ ಬೆಳವಣಿಗೆಯು ಈ ಪ್ರದೇಶದ ಅಭಿವೃಧ್ಧಿಯ ಮೇಲೆ ಪರಿಣಾಮ ಬೀರಿದೆ.
ರಿಯಲ್ ಎಸ್ಟೇಟ್ ಬೆಳವಣಿಗೆ: ಬೇಗೂರು ಗಮನಾರ್ಹವಾದ ರಿಯಲ್ ಎಸ್ಟೇಟ್ ಅಭಿವೃಧ್ಧಿಗೆ ಸಾಕ್ಷಿಯಾಗಿದೆ. ವಿಶೇಷವಾಗಿ 21ನೇ ಶತಮಾನದಲ್ಲಿ, ತನ್ನ ಸುತ್ತಮುತ್ತಲೂ ತಲೆಯೆತ್ತಿರುವ ಮಾಹಿತಿ ತಂತ್ರಜ್ಞಾನ ಕಂಪನಿಗಳ ಪರಿಣಾಮವಾಗಿ, ಸುಧಾರಿತ ಮೂಲಸೌಕರ್ಯಗಳು, ವಸತಿ, ಮತ್ತು ವಾಣಿಜ್ಯಾಭಿವೃಧ್ಧಿಗೆ ಬೇಗೂರು ಸಾಕ್ಷಿಯಾಗಿದೆ.
ಸಾಂಸ್ಕೃತಿಕ ಪರಂಪರೆ: ನಗರೀಕರಣದಿಂದಾಗಿ ಬೇಗೂರಿನ ಭೂನಕ್ಷೆಯು ಬದಲಾಗಿದ್ದರೂ, ಇದು ಇನ್ನೂ ತನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಕುರುಹುಗಳನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ನಾಗೇಶ್ವರ ದೇವಸ್ಥಾನ ಮತ್ತು ಲೊಯೊಲದ ಸಂತ ಇಗ್ನಾಸಿಯವರ ದೇವಾಲಯ ಇಲ್ಲಿನ ಐತಿಹಾಸಿಕ ಪುಣ್ಯಕ್ಷೇತ್ರಗಳಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ. ಹಾಗೂ ಇತರ ಐತಿಹಾಸಿಕ ತಾಣಗಳು, ಇಲ್ಲಿ ದೊರೆತಿರುವ ಪ್ರಾಚೀನ ಅವಶೇಷಗಳು ಮತ್ತು ಶಿಲಾಶಾಸನಗಳು ಇತಿಹಾಸದಲ್ಲಿ ಆಸಕ್ತಿಯಿರುವ ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಸಮುದಾಯ ಜೀವನ: ನಗರೀಕರಣದ ಹೊರತಾಗಿಯೂ, ಬೇಗೂರು ತನ್ನ ಸಮುದಾಯದ ಸಹಬಾಳ್ವೆಯ ಪ್ರಜ್ಞೆಯನ್ನು ಉಳಿಸಿಕೊಂಡಿದೆ. ಸ್ಥಳೀಯ ಹಬ್ಬಗಳು, ತಲೆಮಾರುಗಳಿಂದ ಬಂದ ಸಂಪ್ರದಾಯಗಳು ಮತ್ತು ಸಾಮುದಾಯಿಕ ಘಟನೆಗಳು ಈ ಪ್ರದೇಶದ ಪ್ರಸಿದ್ದಿಯನ್ನು ಹೆಚ್ಚಿಸಿವೆ.
ಸವಾಲುಗಳು: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಇತರ ಭಾಗಗಳಂತೆ, ಬೇಗೂರು ಸಹ ಮೂಲಭೂತ ಸೌಕರ್ಯ, ಸಂಚಾರ ದಟ್ಟಣೆ ಮತ್ತು ನಗರಾಭಿವೃದ್ದಿ ಯೋಜನೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುತ್ತಿದೆ. ಐತಿಹಾಸಿಕ ತಾಣಗಳು, ಪುಣ್ಯಕ್ಷೇತ್ರಗಳು, ಮತ್ತು ಸಾಂಸ್ಕೃತಿಕ ಗುರುತುಗಳ ಸಂರಕ್ಷಣೆಯೊಂದಿಗೆ ಅಭಿವೃದ್ದಿಯನ್ನು ಸಮತೋಲನಗೊಳಿಸುವುದು ಒಂದು ದೊಡ್ಡ ಸವಾಲಾಗಿ ಉಳಿದಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಬೇಗೂರಿನ ಇತಿಹಾಸವು ಪ್ರಾಚೀನ ರಾಜವಂಶಗಳು ಮತ್ತು ವಸಾಹತುಶಾಹಿಗಳ ಪ್ರಭಾವ ಮತ್ತು ಆಧುನಿಕ ಬೆಳವಣಿಗೆಗಳ ಮಿಶ್ರಣವಾಗಿದೆ. ಪ್ರಾಚೀನತೆಯಿಂದ ನವಯುಗದತ್ತ ವಿಕಸನಗೊಂಡ ಪಥದಲ್ಲಿ ಬೇಗೂರು ಸಾಗುತ್ತಾ, ಬೆಂಗಳೂರಿನ ಬೆಳವಣಿಗೆ ಮತ್ತು ರೂಪಾಂತರದ ಪಥವನ್ನು ಪ್ರತಿಬಿಂಬಿಸುತ್ತದೆ.
ಸಂತ ಇಗ್ನಾಸಿಯವರ ದೇವಾಲಯದ ಇತಿಹಾಸ
ಹೈದರ್ ಅಲಿಯು ಬೆಂಗಳೂರು ಪ್ರಾಂತ್ಯವನ್ನು ಆಳುತ್ತಿದ್ದ ಕಾಲದಲ್ಲಿ ಬೇಗೂರಿನಲ್ಲಿ ಕ್ರೈಸ್ತ ಧರ್ಮದ ಉಗಮವಾಯಿತೆಂದು ಹೇಳಬಹುದು. ಆತನ ಕಾಲದಲ್ಲಿ, ಸಂತೆ ಬೀದಿಯಲ್ಲಿ ಸೈನಿಕ ಶಿಬಿರಗಳನ್ನು ಆಯೋಗಿಸಲಾಗುತ್ತಿತ್ತು. ಆ ಸೈನಿಕ ಶಿಬಿರಗಳಲ್ಲಿ ಕ್ರೈಸ್ತ ಸೈನಿಕರಿದ್ದರು, ಅವರು ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದರು. 1761 ರಿಂದ 1782 ರ ನಡುವೆ, ಕ್ರೈಸ್ತ ಸೈನಿಕರು ಪ್ರಾರ್ಥನೆ ಮಾಡಲು ಸಣ್ಣ ಡೇರೆ (ಟೆಂಟ್) ಗಳನ್ನು ಪ್ರಾರ್ಥನಾ ಮಂದಿರವಾಗಿ ಉಪಯೋಗಿಸುತ್ತಿದ್ದರು. ಬೇಗೂರಿನ ಮೊದಲ ಪ್ರಾರಂಭಿಕ ದೇವಾಲಯ (ಚರ್ಚು) ಡೇರೆ (ಟೆಂಟ್) ರೂಪದ್ದಾಗಿತ್ತು.
1773 ರಲ್ಲಿ ಯೇಸು ಸಭೆಯ (ಜೆಸ್ವಿಟ್ಸ್) ಗುರುಗಳ ಧಾರ್ಮಿಕ ಸೇವಾಕಾರ್ಯದ ಅವಧಿ ಮುಗಿದ ಮೇಲೆ, ಎಂ.ಇ.ಪಿ {(Paris Foreign Missions (MEP)} ಗುರುಗಳು ಧಾರ್ಮಿಕ ಸೇವಾಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ವಹಿಸಿಕೊಂಡರು. Paris Foreign Missions (MEP) ಗುರುಗಳ ಕೇಂದ್ರ ಕಛೇರಿಯು ಮೈಸೂರು ಪ್ರಾಂತ್ಯದಲ್ಲಿ ಪ್ರಾರಂಭವಾಯಿತು. MEP ಗುರುಗಳು ಬೇಗೂರಿಗೆ ಬಂದಾಗ ಅಲ್ಲಿ ಆಗಲೇ ಸಂತ ಫ್ರಾನ್ಸಿಸ್ ಕ್ಸೇವಿಯರ್ ರವರಿಗೆ ಮೀಸಲಾದ (ಚರ್ಚು) ದೇವಾಲಯ ಇತ್ತು. ಚರ್ಚುಗಳಿಗೆ ಸಂತರ ಹೆಸರನ್ನಿಡುವುದು ಯೇಸು ಸಭೆಯ ಗುರುಗಳ ವಾಡಿಕೆಯೆಂದು ಊಹಿಸಲಾಗಿತ್ತು. ಪ್ರಸ್ತುತ ಚರ್ಚ ಕಾಂಪೌಡಿನಲ್ಲಿ 1810 ರಲ್ಲಿ ತೆಂಗಿನ ಗರಿಗಳಿಂದ ನಿರ್ಮಿಸಲಾದ ಸಣ್ಣ ಗುಡಿಸಲು ದೇವಾಲಯವಾಗಿತ್ತು. ಈ ಮೊದಲ ದೇವಾಲಯವನ್ನು ಸಂತ ಫ್ರಾನ್ಸಿಸ್ ಕ್ಸೇವಿಯರ್ ರವರಿಗೆ ಸಮರ್ಪಿಸಲಾಯಿತು. ಬೇಗೂರು ಗ್ರಾಮದಲ್ಲಿ ಕ್ರೈಸ್ತ ಧರ್ಮದ ಉಗಮ 1810 ಕ್ಕೆ ಮೊದಲೇ ಪ್ರಾರಂಭವಾಯಿತು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಈ ದೇವಾಲಯವನ್ನು ಕಟ್ಟುವ ಮೊದಲು, ಅಂದರೆ 1775-1780 ಕ್ಕೆ ಮುನ್ನವೇ ಚಿಕ್ಕ ಬಳ್ಳಾಪುರದಿಂದ ಆನೇಕಲ್ಲಿಗೆ ಪ್ರಯಾಣಿಸುತ್ತಿದ್ದ ಉಪದೇಶಿಯು (catechist) ಮಾರ್ಗ ಮದ್ಯೆ ಬೇಗೂರಿನಲ್ಲಿ ಭಕ್ತಾದಿಗಳಿಗೆ ಧಾರ್ಮಿಕ ಸಂಸ್ಕಾರಗಳನ್ನು ನೀಡುವ ಕಾರ್ಯವನ್ನು ಆಯೋಜಿಸುತ್ತಿದ್ದರು.
ತನ್ನ ಐತಿಹಾಸಿಕ ತೀರ್ಪೊಂದರಲ್ಲಿ, ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ (OS No. 05446/89) ಬೇಗೂರು ಗ್ರಾಮದಲ್ಲಿ ರೋಮನ್ ಕಥೋಲಿಕರು 1725 ರ ಪ್ರಾರಂಭದಲ್ಲಿಯೇ ವಾಸಿಸುತ್ತಿದ್ದರೆಂದು ಧೃಢೀಕರಿಸುತ್ತದೆ. ಚಾರಿತ್ರಿಕ ದಾಖಲೆಗಳ ಪ್ರಕಾರ, ರೋಮನ್ ಕಥೋಲಿಕರು ತಮ್ಮ ಸತ್ತವರನ್ನು ಊರಿನ ಹೊರಗಿರುವ ಕಥೋಲಿಕ ಸ್ಮಶಾನದಲ್ಲಿ ಹೂಳುತ್ತಿದ್ದರು. ಕರ್ನಾಟಕ ರಾಜ್ಯ ಸರಕಾರ vs ಬೇಗೂರಿನ ಗ್ರಾಮಸ್ಥರ ನಡುವಿನ ಪ್ರಕರಣದಲ್ಲಿ, ಉಚ್ಚ ನ್ಯಾಯಾಲಯವು ತನ್ನ ಅನುಮೋದನೆಯಲ್ಲಿ ಬೇಗೂರಿನಲ್ಲಿ ಕ್ರೈಸ್ತ ಸಮುಧಾಯದ ಅಸ್ತಿತ್ವವವು 1725 ರಿಂದಲೂ ಇರುವುದೆಂದು ಧೃಢೀಕರಿಸುತ್ತದೆ. ಶೆಟ್ಟಿಹಳ್ಳಿಯಿಂದ ತಿರುಪತ್ತೂರಿಗೆ ಪ್ರಯಾಣಿಸುತ್ತಿದ್ದ ಮಿಷನರಿಗಳು ತಮ್ಮ ಧಾರ್ಮಿಕ ಪತ್ರಗಳಲ್ಲಿ ಉಲ್ಲೇಖಿಸಿರುವ ಗ್ರಾಮಗಳಲ್ಲಿ ಬೇಗೂರೂ ಒಂದಾಗಿದೆ. “1742 ರಲ್ಲಿ ಫಾದರ್ ಅಲೆಕ್ಸಿಯಸ್ ಸ್ಮರಾಲ್ಡೊ ರವರ ನೇತೃತ್ವದಲ್ಲಿ ಜನರು ಸಂತ ಫ್ರಾನ್ಸಿಸ್ ಕ್ಸೇವಿಯರ್ ರವರ ಹಬ್ಬವನ್ನು ಆಚರಿಸಿದ್ದರು, ಈ ಹಬ್ಬವನ್ನು ಆಚರಿಸಲು ವಿವಿಧ ಗ್ರಾಮಗಳಾದ ಬೇಗೂರು, ಬೆಂಗಳೂರು, ಚಿಕ್ಕ ಕಮ್ಮನಹಳ್ಳಿ, ಸೋಮನಹಳ್ಳಿ, ಕನಕಪುರ ಮತ್ತು ಹಾರೋಬಲೆಯಿಂದ ಜನರು ಬಂದಿದ್ದರು” ಎಂದು ಈ ಮಿಷನರಿಗಳ ಧಾರ್ಮಿಕ ಪತ್ರಗಳು ತಿಳಿಸುತ್ತವೆ. 1773 ರಲ್ಲಿ ಯೇಸು ಸಭೆಯ (ಜೆಸ್ವಿಟ್ಸ್) ಗುರುಗಳ ಧಾರ್ಮಿಕ ಸೇವಾಕಾರ್ಯದ ಅವಧಿ ಮುಗಿದ ಮೇಲೆ, ಎಂ.ಇ.ಪಿ {(Paris Foreign Missions (MEP)} ಗುರುಗಳು ಧಾರ್ಮಿಕ ಸೇವಾಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ವಹಿಸಿಕೊಂಡು, ಅಂದಿನ ಮೈಸೂರು ಪ್ರಾಂತ್ಯದಲ್ಲಿ ಜನರಿಗೆ ಅಮೋಘ ಸೇವೆಯನ್ನು ಮಾಡಿದ್ದಾರೆ.
1810 ರಲ್ಲಿ (MEP) ಗುರುಗಳು ಬೇಗೂರು ಗ್ರಾಮಸ್ಥರ ಸಹಾದಿಂದ ತೆಂಗಿನ ಗರಿಗಳಿಂದ ಸಣ್ಣ ಗುಡಿಸಲನ್ನು ನಿರ್ಮಿಸಿ, ಅದನ್ನು ದೇವಾಲಯವಾಗಿ ಮಾರ್ಪಡಿಸಿದರು. ಇದುವೇ ಬೇಗೂರಿನ ಕ್ರೈಸ್ತರಿಗೆ ಮೊದಲನೇಯ ದೇವಾಲಯವಾಯಿತು. ಈ ಮೊದಲ ದೇವಾಲಯವನ್ನು ಸಂತ ಫ್ರಾನ್ಸಿಸ್ ಕ್ಸೇವಿಯರ್ ರವರಿಗೆ ಸಮರ್ಪಿಸಲಾಯಿತು. ಫಾ|| ಜೆರ್ರಿಗೆ ರವರು ಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವ ಮತ್ತು ಧಾರ್ಮಿಕ ಸಂಸ್ಕಾರಗಳನ್ನು ನೀಡುವ ಜವಾಬ್ದಾರಿ ವಹಿಸಿಕೊಂಡರು. 1847 ರಲ್ಲಿ ಫಾ|| ಜೆರ್ರಿಗೆ ರವರೇ ಬೇಗೂರಿನ ಪ್ರಪ್ರಥಮ ವಿಚಾರಣೆ ಗುರುಗಳಾಗಿ ಅಧಿಕಾರ ವಹಿಸಿಕೊಂಡರು. ಇವರ ನಂತರ ಹಲವಾರು ಗುರುಗಳು ಬೇಗೂರಿನ ವಿಚಾರಣೆ ಗುರುಗಳಾಗಿ ಅಧಿಕಾರ ವಹಿಸಿಕೊಂಡರು. ಅವರಲ್ಲಿ ಫಾ|| ಮೊಂಟಂಡ್ರಾಡ್ ಮತ್ತು ಫಾ|| ರೆನೌಡಿನ್ (1863), ಫಾ|| ಬೊಕೆ (1868), ಫಾ|| ಜಾಕೆನೀರ್ (1888), ಫಾ|| ಯುಯರ್ನ್ಯೂ (1890), ಫಾ|| ರೌಸ್ (1895), ಫಾ|| ಫೈಸಾಂಡಿಯರ್ (1906), ಫಾ|| ಕ್ಯಾಪೆಲ್ಲೆ (1932). ಫಾ|| ಕ್ಯಾಪೆಲ್ಲೆರವರ ನಂತರ ಸ್ಥಳೀಯ ಗುರುಗಳು ಬೇಗೂರು ವಿಚಾರಣೆಯ ಅಧಿಕಾರ ವಹಿಸಿಕೊಂಡು ಧಾರ್ಮೀಕ ಸೇವಾಕಾರ್ಯಗಳನ್ನು ಮುಂದುವರಿಸುತ್ತಿದ್ದಾರೆ.
ಎರಡನೇಯ ದೇವಾಲಯವನ್ನು 1862 ರಲ್ಲಿ ಫಾ|| ರೆನಾಡಿನ್ ರವರು ನಿರ್ಮಿಸಿದರು. ಅವರು ಈ ದೇವಾಲಯವನ್ನು ಪವಿತ್ರ ಶಿಲುಬೆಯ ಆಕಾರದಲ್ಲಿ ನಿರ್ಮಿಸಿದರು. ಸೆಪ್ಟಂಬರ್ 16, 1862 ರಂದು ದೇವಾಲಯವನ್ನು ಉಧ್ಘಾಟಿಸಲಾಯಿತು. ಅಂದಿನ ಧರ್ಮಾಧ್ಯಕ್ಷರಾದ ಬಿಷಪ್ ಚಾರ್ಬೊನಾಕ್ಸ್, MEP ಸಂಸ್ಥೆಯ 5 ಗುರುಗಳು ಮತ್ತು ಸುಮಾರು 300 ರಿಂದ 400 ಜನ ಸ್ಥಳೀಯ ಕ್ರೈಸ್ತರು ಈ ಉಧ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮೂರನೇಯ ದೇವಾಲಯವನ್ನು ಫಾ|| ಸಿ. ಅಂತಪ್ಪರವರ ಕಾಲದಲ್ಲಿ ನಿರ್ಮಿಸಲಾಯಿತು. ಫಾ|| ಸಿ. ಅಂತಪ್ಪರವರು ನಿರ್ಮಿಸಿದ ನೂತನ ದೇವಾಲಯವನ್ನು ಲೊಯೊಲದ ಸಂತ ಇಗ್ನಾಸಿಯವರಿಗೆ ಸಮರ್ಪಿಸಲಾಯಿತು. ದೇವಾಲಯದ ಹೆಸರಿನ ಬದಲಾವಣೆಯ ಬಗ್ಗೆ ಯಾವುದೇ ರೀತಿಯ ದಾಖಲೆಗಳು, ಪತ್ರಗಳು ಅಥವಾ ವಿವರಗಳು ಲಭ್ಯವಿಲ್ಲ. ಈ ಮೂರನೇಯ ದೇವಾಲಯದ ಅಡಿಪಾಯವನ್ನು ಮಾರ್ಚ್ 2, 1959 ರಂದು ಹಾಕಲಾಯಿತು ಮತ್ತು ಡಿಸೆಂಬರ್ 15, 1960 ರಂದು ಆಗಿನ ಮಹಾ ಧರ್ಮಾಧ್ಯಕ್ಷರಾಗಿದ್ದ ಬಿಷಪ್ ಥಾಮಸ್ ಪೊಥಕಮುರಿ ಅವರು ಉಧ್ಘಾಟಿಸಿದರು.
ನಾಲ್ಕನೇಯ ದೇವಾಲಯ ಬೇಗೂರು ವಿಚಾರಣೆಯ ಭಕ್ತ ವಿಶ್ವಾಸಿಗಳ ಕನಸಾಗಿತ್ತು. ವಿಚಾರಣೆ ಬೆಳೆದಂತೆ, ಭಕ್ತರ ಸಂಖ್ಯೆ ಹೆಚ್ಚಾಯಿತು, ದೇವಾಲಯ ಚಿಕ್ಕದಾಯಿತು. ದೇವಾಲಯದಲ್ಲಿ ಸ್ಥಳದ ಕೊರತೆಯಿಂದಾಗಿ, ಭಕ್ತ ವಿಶ್ವಾಸಿಗಳು ಬಲಿಪೂಜೆಯಲ್ಲಿ ಭಾಗವಹಿಸಲು ಕಷ್ಟವಾಗಲಾರಂಭಿಸಿತು. ಬಲಿಪೂಜೆಗೆ ಬರುತ್ತಿದ್ದ ಭಕ್ತರಲ್ಲಿ ಹೆಚ್ಚಿನವರು ದೇವಾಲಯದ ಹೊರಗೇ ಉಳಿಯಬೇಕಾದ ಪರಿಸ್ಥಿತಿ ಉಂಟಾಯಿತು. ವಿಚಾರಣೆಯ ಭಕ್ತರು 2000 ದ ಇಸವಿಯಿಂದ ಹೊಸ ದೇವಾಲಯಕ್ಕಾಗಿ ಪ್ರಾರ್ಥಿಸಲು ಪ್ರಾರಂಭಿಸಿದರು. ಆಗಸ್ಟ್ 13, 2017 ರಂದು ಅಂದಿನ ಮಹಾ ಧರ್ಮಾಧ್ಯಕ್ಷರಾದ ಬಿಷಪ್ ಬರ್ನಾಡ್ ಮೊರಾಸ್ ರವರು ಹೊಸ ದೇವಾಲಯಕ್ಕೆ ಶಂಕುಸ್ಥಾಪನೆ ಮಾಡಿದರು. ಅವರು ಅಡಿಗಲ್ಲು ಹಾಕಿದ ದಿನದಿಂದಲೇ ನೂತನ ದೇವಾಲಯ ಕಟ್ಟುವ ಕನಸು ನನಸಾಗುವುದೆಂಬ ಭರವಸೆ ಭಕ್ತಾದಿಗಳಲ್ಲಿ ಮೂಡಿತು. ಅಂದಿನ ವಿಚಾರಣೆಯ ಗುರುಗಳಾಗಿದ್ದ ಫಾ|| ಸಹಾಯರಾಜ್ ನೂತನ ದೇವಾಲಯ ಕಟ್ಟುವ ಜವಾಬ್ಧಾರಿ ವಹಿಸಿಕೊಂಡರು. ಫಾ|| ಸಹಾಯರಾಜ್ ರವರು ನೂತನ ದೇವಾಲಯದ ಕೆಲಸವನ್ನು ಪ್ರಾರಂಭಿಸಿದರಾದರೂ, ಅದು ಪೂರ್ಣಗೊಳ್ಳುವ ಮುನ್ನವೇ ಬೇರೆ ವಿಚಾರಣೆಗೆ ವರ್ಗಾವಣೆಯಾದರು. ದೇವಾಲಯವನ್ನು ಕಟ್ಟಿ ಪೂರ್ಣಗೊಳಿಸುವ ಜವಾಬ್ಧಾರಿಯನ್ನು ತಮ್ಮ ನಂತರ ವಿಚಾರಣೆಯ ಅಧಿಕಾರ ವಹಿಸಿಕೊಂಡ ಫಾ|| ಆರೋಕಿಯಸ್ವಾಮಿ ಸೆಬಾಸ್ಟೀಯನ್ ರವರಿಗೆ ಹಸ್ತಾಂತರಿಸಿದರು. ಫಾ|| ಆರೋಕಿಯಸ್ವಾಮಿ ಸೆಬಾಸ್ಟೀಯನ್ ರವರು ಆ ಕಾರ್ಯವನ್ನು ಪೂರ್ಣಗೊಳಿಸಿದರು. ಭಾರತ ಮತ್ತು ನೇಪಾಳದ ಅಪೊಸ್ಟೋಲಿಕ್ ನುನ್ಸಿಯೊ (Apostolic Nuncio) ಆದ ಅತೀ ವಂದನೀಯ ಡಾ. ಲಿಯೋಪೋಲ್ಡೊ ಗಿರೆಲ್ಲಿ ರವರು, ಬೆಂಗಳೂರಿನ ಮಹಾ ಧರ್ಮಾಧ್ಯಕ್ಷರಾದ ಪೀಟರ್ ಮಚಾಡೊ ಮತ್ತು ಗೌರವಾನ್ವಿತ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಬರ್ನಾಡ್ ಮೊರಾಸ್ ಮತ್ತು ವಿಚಾರಣೆಯ ಗುರುಗಳಾದ ಫಾ|| ಆರೋಕಿಯಸ್ವಾಮಿ ಸೆಬಾಸ್ಟೀಯನ್ ರವರ ನೇತೃತ್ವದಲ್ಲಿ ಏಪ್ರಿಲ್ 23, 2022 ರಂದು ನೂತನ ದೇವಾಲಯವನ್ನು ಉಧ್ಘಾಟಿಸಿದರು. ಈ ಐತಿಹಾಸಿಕ ಘಟನೆಯನ್ನು ವೀಕ್ಷಿಸಲು ಸುಮಾರು 15000 ರಿಂದ 16000 ಭಕ್ತಾದಿಗಳು ಸೇರಿದ್ದರು.
ದೇವಾಲಯದ ಆವರಣದಲ್ಲಿ ಲೂರ್ದುಮಾತೆಗೆ ಅರ್ಪಿತವಾದ ಸುಂದರವಾದ ಗವಿ ಇದೆ. “ಬೇಗೂರು ಲೂರ್ದುಮಾತೆಯ ಗವಿ” ಅಥವಾ “ಗ್ರೊಟ್ಟೊ ಆಫ್ ಅವರ್ ಲೇಡಿ ಆಫ್ ಲೂರ್ಡ್ಸ್” ಎಂದು ಕರೆಯಲ್ಪಡುವ ಈ ಗವಿಯು ಅನೇಕ ಅಧ್ಬುತಗಳಿಗೆ ಸಾಕ್ಷಿಯಾಗಿದೆ. ಪರಿಶುದ್ದ ಕನ್ಯಾಮಾತೆಯ ಮಧ್ಯಸ್ಥಿಕೆಯಿಂದ ಪಡೆದುಕೊಂಡ ಎಲ್ಲ ವರಧಾನಗಳಿಗೆ ಕೃತಜ್ಞನತೆಯಾಗಿ ಬೇಗೂರಿನ ಜನತೆ ಈ ಗವಿಯನ್ನು ಕಟ್ಟಿರುತ್ತಾರೆ. ಸುಮಾರು 1944 ರ ಮೊದಲು ಬೇಗೂರು ಗ್ರಾಮದಲ್ಲಿ ಕ್ಷಾಮ ಮತ್ತು ಬರಗಾಲವಿತ್ತು. ಇದರ ಪರಿಣಾಮವಾಗಿ ಜನರು ಮಾರಕವಾದ ರೋಗಕ್ಕೆ ಬಲಿಯಾಗಿ ಸಾಯುತ್ತಿದ್ದರು, ಸತ್ತವರ ಸಂಖ್ಯೆ ಹೆಚ್ಚಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಾಣದೆ, ಸರಿಯಾದ ಚಿಕಿತ್ಸೆ ಇಲ್ಲದೆ, ಅಸಹಾಯಕರಾಗಿದ್ದ ಇಡೀ ಗ್ರಾಮದ ಜನರು ಮಾತೆ ಮೇರಿಯಲ್ಲಿ ಪ್ರಾರ್ಥಿಸಿದರು, ತಮ್ಮ ಜೀವವನ್ನು ಉಳಿಸಬೇಕೆಂದು ಬೇಡಿಕೊಂಡರು. ಮಾತೆ ಮೇರಿ ಅವರ ಪ್ರಾರ್ಥನೆಯನ್ನು ಆಲಿಸಿ, ಅವರ ಕೋರಿಕೆಯನ್ನು ನೆರವೇರಿಸಿದರು. ಜನರ ಜೀವನ ಸುಧಾರಿಸಿತು, ಮಾರಕ ರೋಗ ಮಾಯವಾಯಿತು. ಜನರು ತಮ್ಮ ಪ್ರೀತಿಯ ಸಂಕೇತವಾಗಿ ಮತ್ತು ಮಾತೆ ಮೇರಿಗೆ ಕೃತಜ್ಞತೆಯಾಗಿ ಈ ಗವಿಯನ್ನು ಕಟ್ಟಿ, ಆಗಸ್ಟ್ 1, 1944 ರಂದು ಫಾ|| ಆರ್. ಪಿ. ಜೆ. ಗ್ರೆಟಿಯನ್ (R.P.J. Gratian) ಉಧ್ಘಾಟಿಸಿದರು. ಜನರು ಪ್ರತೀ ವರ್ಷ ಲೂರ್ದುಮಾತೆಯ ಗವಿ ಹಬ್ಬವನ್ನು ಆಚರಿಸುವುದಾಗಿ ಭರವಸೆನೀಡಿದರು. ಅದರಂತೆಯೇ ಅಂದಿನಿಂದ ಪ್ರತೀ ವರ್ಷವೂ ಲೂರ್ದುಮಾತೆಯ ಗವಿ ಹಬ್ಬವನ್ನು ಆಚರಿಸುತ್ತಾ ಬಂದಿರುತ್ತಾರೆ. ಪ್ರತೀ ವರ್ಷವೂ ಎಲ್ಲಾ ಧರ್ಮದ ಜನರು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಅನೇಕ ಜನರು ತಮ್ಮ ಕೋರಿಕೆಗಳು ನೆರವೇರಿದಾಗ, ತಮ್ಮ ಪ್ರರ್ಥನೆಗೆ ಉತ್ತರ ಸಿಕ್ಕಾಗ ದೇವಾಲಯದಲ್ಲಿ ಸಾಕ್ಷಿ ನೀಡುತ್ತಾರೆ. ಉರಿಯುವ ಮೇಣದ ಬತ್ತಿಗಳನ್ನು ಕೈಯಲಿ ಹಿಡಿದು ಬೇಡಿಕೊಂಡರೆ, ಮಾತೆ ಮೇರಿ ನಮ್ಮ ಪ್ರಾರ್ಥನೆಗಳಿಗೆ ಉತ್ತರ ನೀಡುತ್ತಾರೆಂಬ ಬಲವಾದ ನಂಬಿಕೆ ಮತ್ತು ವಿಶ್ವಾಸ ಜನರಲ್ಲಿದೆ.